ಸೌಹಾರ್ದ ಭಕ್ತಿ ಭಾವದಿಂದ ಜರುಗಿದ ಬಾಬಯ್ಯನ ಹಬ್ಬ
ದೊಡ್ಡಬಳ್ಳಾಪುರ:ತೂಬಗೆರೆ ಸೌಹಾರ್ದಕ್ಕೆ ಹೆಸರಾದ ಬಾಬಯ್ಯನ ಹಬ್ಬವನ್ನು ಗುರುವಾರ ಭಕ್ತಿಭಾವದಿಂದ ಆಚರಿಸಲಾಯಿತು. ಮುಸ್ಲಿಮರ ಈ ಪವಿತ್ರ ಹಬ್ಬದಲ್ಲಿ ಹಿಂದೂ ಸಹೋದರರು ಭಾಗವಹಿಸಿ ಧಾರ್ಮಿಕ ಸೌಹಾರ್ದತೆಗೆ ಉತ್ತೇಜನ ನೀಡಿದರು.
ಹಿಂದು-ಮುಸ್ಲಿಂ ಬಾಂಧವ್ಯದ ಸಂಕೇತವಾಗಿ, ಹಿಂದೂಗಳು ಮುಸ್ಲಿಮರಿಗೆ ಅಗತ್ಯ ಸಾಮಗ್ರಿಗಳನ್ನು ನೀಡಿದ ಬಳಿಕ, ಒಂದು ವಾರದ ಹಿಂದೆ ನಿರ್ಮಿತವಾದ ಗುಂಡಿಯಲ್ಲಿ ಕೊಂಡ ಹಾಕಲಾಯಿತು. ಶುಕ್ರವಾರ ಬೆಳಿಗ್ಗೆ, ಹಲವು ವರ್ಷಗಳಿಂದ ಈ ಹಬ್ಬ ಆಚರಿಸುತ್ತಿರುವ ಬಾಬಯ್ಯ ವಂಶಸ್ಥ ಭಾಷಾ ನೇತೃತ್ವದಲ್ಲಿ ಹಸೇನ್-ಹುಸೇನ್ ದೇವರ ಹಸ್ತಗಳನ್ನು ಹೊತ್ತು, ಗ್ರಾಮದ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ನಡೆಸಲಾಯಿತು. ನಂತರ ಗ್ರಾಮದ ಮಧ್ಯದಲ್ಲಿರುವ ಚಾವಡಿ ಬಳಿ ಕರೆತರಲಾಯಿತು. ಅನೇಕರು ಹರಕೆ ಹೊತ್ತು ಕೊಂಡು ಹಾಯಿವುದರಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಜಾತಿ-ಭೇದವಿಲ್ಲದೆ ಎಲ್ಲರೂ ಒಂದಾಗಿ ಹಬ್ಬವನ್ನು ಯಶಸ್ವಿಯಾಗಿ ಆಚರಿಸಿದರು.
ಈ ಸಂದರ್ಭದಲ್ಲಿ, ಗ್ರಾಮದ ಹಿರಿಯರಾದ ಕೃಷ್ಣಪ್ಪ ಮಾತನಾಡುತ್ತಾ, “ನಮ್ಮ ತಾತಮುತ್ತಾತನ ಕಾಲದಿಂದಲೇ ಈ ಹಬ್ಬವನ್ನು ಹಿಂದುಗಳು-ಮುಸ್ಲಿಂ ಸಹೋದರತ್ವದ ಸಂಕೇತವಾಗಿ ಆಚರಿಸುತ್ತಿದ್ದಾರೆ. ಯಾವುದೇ ರೋಗ-ರುಜಿನಗಳು ಗ್ರಾಮದಲ್ಲಿ ಹರಡದಿರಲಿ, ಗ್ರಾಮಕ್ಕೆ ಒಳ್ಳೆಯದುಂಟಾಗಲಿ ಎಂಬ ಉದ್ದೇಶದಿಂದ ಈ ಹಬ್ಬವನ್ನು ಪ್ರತಿವರ್ಷ ಆಚರಿಸುತ್ತೇವೆ,” ಎಂದು ತಿಳಿಸಿದರು.
ಯುವ ಮುಖಂಡ ಉದಯ ಆರಾಧ್ಯ ಮಾತನಾಡಿ, “ನಮ್ಮ ಹಿರಿಯರು ಬಾಬಯ್ಯನ ಹಬ್ಬವನ್ನು ಸೌಹಾರ್ದದ ಸಂಕೇತವಾಗಿ ಆಚರಿಸುತ್ತಾ ಬಂದಿದ್ದಾರೆ. ಗ್ರಾಮದಲ್ಲಿ ಮತಭೇದವಿಲ್ಲದೆ ಎಲ್ಲ ಧರ್ಮ ಹಾಗೂ ಜಾತಿಯವರು ಶಾಂತಿ ಮತ್ತು ಸೌಹಾರ್ದದಿಂದ ಭಾಗವಹಿಸಿದ್ದು, ಇದು ನಮ್ಮ ಬಹುಸಂಸ್ಕೃತಿಯ ಮಹತ್ವವನ್ನು ಪ್ರತಿಬಿಂಬಿಸುತ್ತದೆ,” ಎಂದು ಅಭಿಪ್ರಾಯಪಟ್ಟರು.
ಈ ಹಬ್ಬದ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಶಿವಣ್ಣ, ಮಾಜಿ ಸದಸ್ಯ ದೇವೇಂದ್ರಪ್ಪ, ಮುಖಂಡರಾದ ಹುಸೇನ್, ರವಿ, ಅಸ್ಲಾಂ, ಯುವ ಮುಖಂಡರಾದ ಉದಯ ಆರಾಧ್ಯ, ಮಧು ಮತ್ತು ಇತರರು ಹಾಜರಿದ್ದರು.