ಗುಂಡಿ ಬಿದ್ದ ರಸ್ತೆಯಲ್ಲಿ ರಾಗಿ ನಾಟಿ ಮಾಡಿ ವಿನೂತನ ಪ್ರತಿಭಟನೆ

ದೊಡ್ಡಬಳ್ಳಾಪುರ: ತಾಲ್ಲೂಕಿನಿಂದ ತಾಲ್ಲೂಕಿಗೆ ಸಂಪರ್ಕಿಸುವ ರಸ್ತೆ ನಿರಂತರ ಮಳೆಗೆ ಸಂಪೂರ್ಣ ಕೆರೆಯಾಗಿ, ಜನಜೀವನ ಅಸ್ತವ್ಯಸ್ತಗೊಂಡಿದೆ. ಹಲವು ವರ್ಷಗಳಿಂದ ರಸ್ತೆಗೆ ಡಾಂಬರು ಹಾಕಿಸದೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಬೇಸತ್ತ ಸುತ್ತಮುತ್ತಲಿನ ಗ್ರಾಮಸ್ಥರು, ರಸ್ತೆಯ ಮಧ್ಯೆ ಇದ್ದ ದೊಡ್ಡ ಗುಂಡಿಗಳಲ್ಲಿ ರಾಗಿ ನಾಟಿ ಮಾಡಿ ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.

ದೊಡ್ಡಬಳ್ಳಾಪುರ ಹಾಗು ಮಂಚೇನಹಳ್ಳಿ (ಗೌರಿಬಿದನೂರು) ತಾಲ್ಲೂಕಿಗೆ ರಸ್ತೆ ಸಂಪರ್ಕಿಸುವ ರಸ್ತೆ ಸುಮಾರು ವರ್ಷ ಕಳೆದರು ಇಪ್ಪತ್ತು ರಿಂದ ಇಪ್ಪತ್ತೈದು ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆ ಸಂಪೂರ್ಣ ಗುಂಡಿಮಯವಾಗಿ ಮಾರ್ಪಟ್ಟಿದ್ದು, ಪ್ರತಿದಿನ ಶಾಲೆ, ಕಾಲೇಜು ಹಾಗೂ ಉದ್ಯೋಗ ಸ್ಥಳಗಳಿಗೆ ತೆರಳುವ ಸಾರ್ವಜನಿಕರು ಪರದಾಡುವ ಸ್ಥಿತಿ ಎದುರಿಸುತ್ತಿದ್ದಾರೆ. ಮಳೆ ಬಂದಾಗ ಗುಂಡಿಗಳಲ್ಲಿ ನೀರು ತುಂಬಿ, ವಾಹನಗಳು ಕೆಸರುಗದ್ದೆಯಲ್ಲಿ ಸಿಲುಕುವಂತಾಗುತ್ತಿದೆ. ಬಸ್ ಹಾಗೂ ಇತರೆ ವಾಹನಗಳು ಸಂಚರಿಸಲು ಕಷ್ಟವಾಗಿರುವ ಕಾರಣ, ಕೆಲ ಹಳ್ಳಿಗಳು ಬಹುತೇಕ ಪ್ರತ್ಯೇಕಗೊಂಡಂತ ಸ್ಥಿತಿಯಲ್ಲಿವೆ.

ಸ್ಥಳೀಯರು ಹೇಳುವಂತೆ, ಈ ರಸ್ತೆಯ ದುಸ್ಥಿತಿಯಿಂದ ಆರೋಗ್ಯ ಸಮಸ್ಯೆಗಳೂ ಗಂಭೀರ ರೂಪ ಪಡೆದುಕೊಂಡಿವೆ. ತುರ್ತು ಸಂದರ್ಭದಲ್ಲಿ ಆಸ್ಪತ್ರೆಗೆ ತಲುಪಲು ಸಮಯ ಕಳೆದು ಅಪಾಯವಾಗುವ ಘಟನೆಗಳೂ ನಡೆದಿವೆ. ವಿಶೇಷವಾಗಿ, ಗರ್ಭಿಣಿಯರನ್ನು ಆಸ್ಪತ್ರೆಗೆ ಸಾಗಿಸಲು ವಿಳಂಬವಾದ ಪರಿಣಾಮ, ಗರ್ಭಪಾತದಂತಹ ದುರ್ಘಟನೆಗಳೂ ನಡೆದಿವೆ ಎಂದು ಆರೋಪಿಸಲಾಗಿದೆ.

ಈ ಕುರಿತು ಆಶಾ ಕಾರ್ಯಕರ್ತೆ ಒಬ್ಬರು ಹೇಳುವಾಗ, “ರಸ್ತೆಯ ಗುಂಡಿಗಳಿಂದ ಆಂಬ್ಯುಲೆನ್ಸ್ ಅಥವಾ ವಾಹನಗಳು ಬೇಗ ಸಾಗಲು ಸಾಧ್ಯವಾಗುತ್ತಿಲ್ಲ. ಕೆಲವೊಮ್ಮೆ ತಾಯಂದಿರು ಮತ್ತು ಶಿಶುಗಳ ಜೀವ ಹಾನಿಯಾಗುವ ಸ್ಥಿತಿ ಉಂಟಾಗಿದೆ. ಹಲವು ಬಾರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ, ಆದರೆ ಪರಿಹಾರ ಕಾಣಲಿಲ್ಲ,” ಎಂದು ವಿಷಾದಿಸಿದರು.

ಈ ಸಂದರ್ಭದಲ್ಲಿ, ಹಳ್ಳಿ ರೈತ ಅಂಬ್ರೀಶ್ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿ, “ನಮ್ಮ ಹಳ್ಳಿಗಳ ಜನರ ಸಮಸ್ಯೆಗಳನ್ನು ಅಧಿಕಾರಿಗಳು ಕೇಳುವ ಸ್ಥಿತಿಯಲ್ಲೇ ಇಲ್ಲ. ಚುನಾವಣೆ ವೇಳೆ ದೊಡ್ಡ ಮಾತುಗಳನ್ನಾಡಿ, ನಂತರ ಜನರ ನೋವುಗಳನ್ನು ಕಡೆಗಣಿಸುವುದು ಅವರ ಅಹಂಕಾರದ ನೈಜ ಮುಖ. ಜನರನ್ನು ಮರೆತರೆ, ಜನರು ಅವರನ್ನು ಮರೆತೇ ಬಿಡುತ್ತಾರೆ,” ಎಂದು ಎಚ್ಚರಿಕೆ ನೀಡಿದರು.

ಈ ರಸ್ತೆ ಆಹಾರ ಸಚಿವ ಕೆ. ಎಚ್. ಮುನಿಯಪ್ಪ ಸ್ಪರ್ಧಿಸುವ ಕ್ಷೇತ್ರದ ಭಾಗವಾಗಿರುವುದರಿಂದ, ಸಮಸ್ಯೆ ರಾಜಕೀಯ ವಲಯದಲ್ಲೂ ಚರ್ಚೆಗೆ ಗ್ರಾಸವಾಗಿದೆ. ಸ್ಥಳೀಯರು, ಚುನಾವಣೆ ವೇಳೆ ನೀಡಿದ ಭರವಸೆಗಳು ನೆಲೆಯೂರದಿರುವುದನ್ನು ಟೀಕಿಸಿದ್ದಾರೆ.

ಗ್ರಾಮಸ್ಥರು ಜಿಲ್ಲಾ ಹಾಗೂ ಸಾರ್ವಜನಿಕ ಕಾರ್ಯ ಇಲಾಖೆಗೆ ತಕ್ಷಣ ರಸ್ತೆ ಸುಧಾರಣೆ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಕ್ರಮ ಕೈಗೊಳ್ಳದಿದ್ದಲ್ಲಿ ಹೋರಾಟವನ್ನು ಮುಂದುವರಿಸಿ, ತಾಲೂಕು ಕೇಂದ್ರದಲ್ಲಿ ಬೃಹತ್ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.