ದೊಡ್ಡಬಳ್ಳಾಪುರ : ರಾಜಘಟ್ಟ ಗ್ರಾಮ ವಿಶ್ವ ಪಾರಂಪರಿಕ ತಾಣವಾಗುವ ಎಲ್ಲಾ ಸಾಧ್ಯತೆಗಳು ಇವೆ : ಡಾ.ಎಲ್ ಹನುಮಂತಯ್ಯ
ದೊಡ್ಡಬಳ್ಳಾಪುರ : ತಾಲ್ಲೂಕಿನ ರಾಜಘಟ್ಟ ವಿಶ್ವ ಪಾರಂಪರಿಕ ತಾಣವಾಗುವ ಎಲ್ಲಾ ಸಾಧ್ಯತೆಗಳೂ ಇವೆ ಎಂದು ಹಿರಿಯ ಸಾಹಿತಿಗಳು ಹಾಗೂ ಮಾಜಿ ರಾಜ್ಯಸಭಾ ಸದಸ್ಯ ಡಾ ಎಲ್ ಹನುಮಂತಯ್ಯ ಅವರು ಅಭಿಪ್ರಾಯಪಟ್ಟರು.
ಇಂದು ನಗರದ ಪ್ರವಾಸಿ ಮಂದಿರದಲ್ಲಿ ರಾಜಘಟ್ಟದಲ್ಲಿ ನಡೆಯಲಿರುವ ಬೌದ್ಧ ನೆಲೆಯ ಉತ್ಖನನದ ಬಗ್ಗೆ ಬುದ್ಧನ ಅನುಯಾಯಿಗಳು, ಸಾಹಿತಿಗಳು, ಪತ್ರಕರ್ತರು ಹಾಗೂ ಸಂಶೋಧಕರ ಸಭೆಯಲ್ಲಿ ಅವರು ಮಾತನಾಡಿದರು.
ರಾಜಘಟ್ಟದಲ್ಲಿ ಉತ್ಖನನ ನಡೆದ ಇಪ್ಪತ್ತು ವರ್ಷಗಳ ನಂತರ ನಾವು ಮತ್ತೆ ಎಚ್ಚೆತ್ತಿದ್ದೇವೆ. ಉತ್ಖನನದ ರೂವಾರಿಗಳಾದ ಮೈಸೂರಿನ ಕೃಷ್ಣಮೂರ್ತಿ ಅವರು ಈ ಬಗ್ಗೆ ಹೆಚ್ಚು ಕಾಳಜಿ ವಹಿಸಿದ್ದಾರೆ. ಮಳೆಗಾಲವಾದ್ದರಿಂದ ಉತ್ಖನನ ಕಾರ್ಯ ಸ್ವಲ್ಪ ಸ್ಥಗಿತವಾಗಿದೆ ಎಂದರು.
ಎರಡೂವರೆ ಸಾವಿರ ವರ್ಷಗಳ ಹಿಂದಿನ ಬೌದ್ಧ ನೆಲೆ ಇದಾಗಿದ್ದು, ಅಲ್ಲಿನ ಅವಶೇಷಗಳನ್ನು ಪರಿಶೀಲಿಸಿದರೆ ಗ್ರೀಕ್ ನಾಗರೀಕತೆಯನ್ನು ನೆನಪಿಸುತ್ತದೆ. ಬೌದ್ಧ ಧಮ್ಮ ಉಚ್ರಾಯ ಸ್ಥಿತಿಯಲ್ಲಿ ಇದ್ದಾಗಿನ ಕುರುಹುಗಳನ್ನು ಕಾಣಬಹುದಾಗಿದೆ ಎಂಬುದು ಸಂಶೋಧಕರ ಅಭಿಪ್ರಾಯವಾಗಿದೆ ಎಂದರು.
ಉತ್ಖನನ ಮುಂದುರೆಸಲು ಬೌದ್ಧ ಅವಶೇಷಗಳು ಎಷ್ಟು ಎಕರೆ ಪ್ರದೇಶದಲ್ಲಿದೆ ಎಂಬ ಬಗ್ಗೆ ನಿಖರವಾದ ಮಾಹಿತಿಬೇಕು. ಒಂದು ಅಂದಾಜಿನ ಪ್ರಕಾರ ಸುಮಾರು ನೂರು ಎಕರೆ ಪ್ರದೇಶದಲ್ಲಿ ಹಬ್ಬಿಕೊಂಡಿರಬಹುದು ಎಂಬ ಮಾಹಿತಿ ಸಿಗುತ್ತಿದೆ. ಅದನ್ನು ತಜ್ಙರು ನಿರ್ಧಾರ ಮಾಡುತ್ತಾರೆ ಈ ಕಾರ್ಯದಲ್ಲಿ ಮಹಾಬೋಧಿ ಸೊಸೈಟಿ ಜೋಡಿಸಬೇಕು ಎಂದರು.
ಈ ಹಿಂದೆ 2002 ರಲ್ಲಿ ನಡೆಸಿದ ಉತ್ಖನನದಲ್ಲಿ ದೊರೆತ ವಸ್ತುಗಳನ್ನು ಮೈಸೂರಿನ ಪ್ರಾಚ್ಯವಸ್ತು ಸಂಶೋಧನಾಲಯದಲ್ಲಿ ಇಡಲಾಗಿದೆ, ಅದನ್ನು ತಂದು ವಸ್ತು ಸಂಗ್ರಹಾಲಯ ಮಾಡಿದರೆ, ಈ ಹಿಂದೆ ರೈತರು ಬೂದಿ ಹಳ್ಳದಿಂದ ಬೂದಿ ತೆಗೆಯುವಾಗ ಸಿಕ್ಕ ಕೆಲವು ವಸ್ತುಗಳನ್ನು ಸುತ್ತಮುತ್ತಲಿನ ಗ್ರಾಮಗಳ ರೈತರು ಅವರ ಮನೆಗಳಲ್ಲಿ ಇಟ್ಟುಕೊಂಡಿರುವ ಮಾಹಿತಿ ಇದೆ. ಸರ್ಕಾರ ಮ್ಯೂಸಿಯಂ ಮಾಡಿದರೆ ರೈತರು ತಮ್ಮ ಬಳಿ ಇರುವ ವಸ್ತುಗಳನ್ನು ತಂದು ಇಡುತ್ತಾರೆ. ಅವರ ಮನವೊಲಿಸುವ ಕೆಲಸವನ್ನು ನಾವು ಮಾಡಬೇಕು. ಉತ್ಖನನ ಮಾಡಿದ ಸ್ಥಳವನ್ನು ಸಾರ್ವಜನಿಕರ ವೀಕ್ಷಣೆಗೆ ಬಿಡಬೇಕು ಮತ್ತು ಉತ್ಖನನವನ್ನು ಪೂರ್ಣಗೊಳಿಸಬೇಕು. ಹಾಗೆ ಮಾಡಿದರೆ ರಾಜಘಟ್ಟ ಭಾರತದ ಭೂಪಟದಲ್ಲಿ ಬಹಳ ಮುಖ್ಯವಾದ ಕೇಂದ್ರ ಸ್ಥಾನವಾಗುತ್ತದೆ ಎಂದರು.
ಇನ್ನೂ ಉತ್ಖನನದ ಉದ್ದೇಶದಿಂದ ರೈತರನ್ನು ಬೀದಿಪಾಲು ಮಾಡಲು ಸಾಧ್ಯವಿಲ್ಲ, ಸರ್ಕಾರ ಕಾರ್ಖಾನೆಯ ಉದ್ದೇಶಕ್ಕೆ ಭೂ ಸ್ವಾಧೀನ ಮಾಡಿಕೊಂಡಂತೆ ಬೌದ್ಧ ನೆಲೆಗೆ ಭೂಮಿಯನ್ನು ಖರೀದಿ ಮಾಡಬೇಕು. ಸರ್ಕಾರ ರೈತರಿಗೆ ಪರ್ಯಾಯ ಭೂಮಿ ನೀಡಿ ಸೂಕ್ತ ಪರಿಹಾರ ನೀಡಬೇಕು.
ರಾಜಘಟ್ಟದ ಸುತ್ತ ಸರ್ಕಾರಿ ಭೂಮಿ ಇದ್ದರೆ ಅದನ್ನ ರಕ್ಷಣೆ ಮಾಡಬೇಕು. ಇದು ಪವಿತ್ರ ಬೌದ್ಧನೆಲೆಯಾಗಿರುವ ಕಾರಣಕ್ಕೆ ಅದನ್ನು ಉಳಿಸಕೊಂಡು ರಾಜಘಟ್ಟವನ್ನು ಒಂದು ಅಂತರಾಷ್ಟ್ರೀಯ ಬುದ್ಧಿಸ್ಟ್ ಸೆಂಟರ್ ಮಾಡಬೇಕಿದೆ.
ಹಿರಿಯ ಸಾಹಿತಿ
ಪ್ರೊ.ಹೆಚ್ ಗೋವಿಂದಯ್ಯ ಮಾತನಾಡಿ ರಾಜಘಟ್ಟ ನಾಲ್ಕು, ಐದನೇ ಶತಮಾನದಲ್ಲೇ ಅಂತರಾಷ್ಟ್ರೀಯ ಬೌದ್ಧ ಕೇಂದ್ರವಾಗಿತ್ತು.
ಅಂತರಾಷ್ಟ್ರೀಯ ಮಟ್ಟದಲ್ಲಿ ಬೌದ್ಧ ಧಮ್ಮ ಪ್ರಚಾರಕ್ಕೆ ಬಿಕ್ಕುಗಳು ರಾಜಘಟ್ಟದಿಂದ ಹೋಗುತ್ತಿದ್ದರು.
ಮಂಟೇಸ್ವಾಮಿ ಅಲ್ಲಮನ ಪ್ರತಿರೂಪವಾಗಿದ್ದು, ಬುದ್ಧನ ಮುಂದುವರೆದ ರೂಪವಾಗಿದೆ. ಹಾಗಾಗಿ ಗತಿಸಿರುವ ಇತಿಹಾಸವನ್ನು ಮರುಕಳಿಸುವ ಕೆಲಸವನ್ನ ನಾವು ಮಾಡಬೇಕಿದೆ. ಆದ್ದರಿಂದ ಇಂತಹ ಘನ ಕಾರ್ಯಕ್ಕೆ ನಾವೆಲ್ಲರೂ ಕೈ ಜೋಡಿಸಬೇಕಿದೆ. ರಾಜಘಟ್ಟ ನಮ್ಮ ಜೀವನದ ಅವಿಭಾಜ್ಯ ಅಂಗವಾಗಬೇಕು. ಹಾಗೂ ಮುಂದಿನ ತಲೆಮಾರಿಗೆ ಕೊಂಡೊಯ್ಯುವ ಕೆಲಸ ಮಾಡಬೇಕು.
ಬುದ್ಧನ ವಿಷಯದಲ್ಲಿ ಯಾವ ಗುಂಪುಗಾರಿಕೆ, ಜಾತಿ, ಧರ್ಮದ ತಾರತಮ್ಯ ಮಾಡಬಾರದು.
ನಮ್ಮೆಲ್ಲರ ಗುರಿ ಬುದ್ಧ ಮಾತ್ರ ಆಗಿರಬೇಕು, ಬುದ್ಧನ ಮೂಲಕ ಜಾತಿ ಧರ್ಮದ ಎಲ್ಲೆಗಳನ್ನು ಮೀರಿ ಮನುಷ್ಯರಾಗೋಣ ಎಂದು ಕರೆಕೊಟ್ಟರು.
ಮುಂದಿನ ಆರು ತಿಂಗಳಲ್ಲಿ ಮ್ಯೂಸಿಯಂ ಮಾಡಬೇಕು, ಒಂದು ವರ್ಷದಲ್ಲಿ ರಾಜಘಟ್ಟ ವಿಶ್ವ ಮಟ್ಟದಲ್ಲಿ ರಾರಾಜಿಸಬೇಕು. ಈ ಕೆಲಸ ಸಾಧಿಸಲು ಸದ್ಯಕ್ಕೆ 20-30 ಎಕರೆ ಸರ್ಕಾರಿ ಭೂಮಿ ಬೇಕು ಎಂದು ಅಭಿಪ್ರಾಯಪಟ್ಟರು.
ಸಂಶೋಧಕ ಡಾ.ವೆಂಕಟೇಶ್ ಮಾತನಾಡಿ, ರಾಜಘಟ್ಟದ ಸುತ್ತಮುತ್ತ ಸುಮಾರು ನೂರಕ್ಕೂ ಹೆಚ್ಚು ವೀರಗಲ್ಲುಗಳಿವೆ. ಆ ಪ್ರದೇಶವನ್ನು ನರೇಂದ್ರ ಭೂಪಾಲ ಎಂಬ ರಾಜ ಆಳ್ವಿಕೆ ಮಾಡಿದ್ದ ಎಂಬುದು ವೀರಗಲ್ಲುಗಳಲ್ಲಿ ಸಿಗುತ್ತದೆ. ಬೌದ್ಧ ರಾಜರು ದೆಹಲಿಯ ರಾಜಘಾಟ್ ನಿಂದ ವಲಸೆ ಬಂದು ಅಲ್ಲಿ ನೆಲೆಸಿದ್ದರು ಆದ್ದರಿಂದ ಈ ಗ್ರಾಮಕ್ಕೆ ರಾಜಘಟ್ಟ ಎಂಬ ಹೆಸರು ಬಂದಿದೆ.
ರಾಜಘಟ್ಟದಲ್ಲಿ ಕಡ್ಡಾಯವಾಗಿ ಮ್ಯೂಸಿಯಂ ಮಾಡಬೇಕು. ರಾಜ್ಯದ ಹಲವು ಸಂಶೋಧಕರ ಬಳಿ ಸಂಶೋಧನೆಯಲ್ಲಿ ದೊರೆತಿರುವ ಅದ್ಭುತವಾದ ವಸ್ತುಗಳು ಇದಾವೆ. ಗಾರೆ ಅಚ್ಚು ಶಿಲ್ಪಗಳಿವೆ. ಇವುಗಳನ್ನು ಒಂದೆಡೆ ಸಂಗ್ರಹಿಸಿ ಮ್ಯೂಸಿಯಂ ನಲ್ಲಿ ಇಡಬೇಕು ಹಾಗೂ ಈ ಸಂಗ್ರಹಾಲಯಕ್ಕೆ ಬೌದ್ಧವನ ಎಂದು ಹೆಸರಿಡಬೇಕು. ದೊಡ್ಡಬಳ್ಳಾಪುರ ಬೌದ್ಧ ಕೇಂದ್ರ ಎಂದು ತಿಳಿಸುವ ಕೆಲಸ ಮಾಡಬೇಕು. ಈ ಕಾರ್ಯಕ್ಕೆ
ರಾಜಘಟ್ಟ ಸೇರಿದಂತೆ ಸುತ್ತಲಿನ ಜನರ ಸಹಕಾರ ಬೇಕು ಎಂದರು.
ಪತ್ರಕರ್ತ ಕೆ.ವೆಂಕಟೇಶ್ ಮಾತನಾಡಿ ವಿವಿಧತೆಯಲ್ಲಿ ಏಕತೆ ಎಂಬುದು ಇಲ್ಲ. ಜರ್ಮನಿ, ಶ್ರೀಲಂಕಾದಲ್ಲಿ ಜನ ತಮ್ಮ ಬೌದ್ಧಿಕ ದಿವಾಳಿತನವನ್ನು ಹೊರಗಟ್ಟಿ ಹೊಸ ಜೀವನಕ್ಕೆ ಕಾಲಿಟ್ಟ ಉದಾಹರಣೆ ನಮ್ಮ ಕಣ್ಣಮುಂದಿದೆ. ಅದನ್ನು ಮಾದರಿಯಾಗಿ ತೆಗೆದುಕೊಂಡು ರಾಜಘಟ್ಟದಲ್ಲಿ ವಿವಿಧತೆಯಲ್ಲಿ ಏಕತೆಯನ್ನು ಕಾಣುವ ಕೆಲಸಕ್ಕೆ ಕೈ ಹಾಕಬೇಕು. ಮೊದಲು ಸ್ಥಳೀಯರನ್ನು ಮನವೊಲಿಸಬೇಕು. ನಾವು ಮಾಡಬೇಕಾದ ಮೊದಲ ಕೆಲಸ ಸುತ್ತಲಿನ ಹಳ್ಳಿಯ ಜನರನ್ನು ತಮ್ಮ ವಿಸ್ಮೃತಿಯಿಂದ ಹೊರಕ್ಕೆ ತರುವುದಾಗಬೇಕು ಎಂದರು.
ರಾಜಘಟ್ಟ ಬೌದ್ಧ ಸ್ಮಾರಕ ಸಮಿತಿಗೆ ಸಂಚಾಲಕರಾಗಿ ಕೆ.ಎಚ್.ರಾಜೇಂದ್ರ, ಡಾ.ಪ್ರಕಾಶ್ ಮಂಟೇದ ಮತ್ತು ರಾಜುಸಣ್ಣಕ್ಕಿ ಹಾಗೂ ಸಂಶೋಧಕ ಡಾ. ವೆಂಕಟೇಶ್ ಇವರುಗಳನ್ನು ಸಂಚಾಲಕರಾಗಿ ಸಮಿತಿಗೆ ನೇಮಕ ಮಾಡಲಾಯಿತು.
ಸಭೆಯಲ್ಲಿ ನ್ಯಾನಲೋಕ ಬಂತೇಜಿ, ಗೋಪಾಲಕೃಷ್ಣ, ಮಾ.ಮುನಿರಾಜು
ಕಂಟನಕುಂಟೆ ಕೃಷ್ಣಮೂರ್ತಿ,
ಸಾಹಿತಿ ಚಿನ್ನು ಪ್ರಕಾಶ್, ರಾಜಗೋಪಾಲ್, ಗೂಳ್ಯಹನುಮಣ್ಣ, ಮಾಳವ ನಾರಾಯಣ, ಡಾ.ಪ್ರಕಾಶ್ ಮಂಟೇದ, ಡಾ.ಸತೀಶ್, ರಮೇಶ್ ಸಂಕ್ರಾಂತಿ, ಕೆ.ಎಚ್.ರಾಜೇಂದ್ರ, ವಕೀಲರಾದ ಸಿದ್ದಾರ್ಥ, ಅಶೋಕ, ಕರೀಂಸೊಣ್ಣೆನಹಳ್ಳಿ ಮುನಿಯಪ್ಪ, ರಾಜಘಟ್ಟ ಹೋಬಳೇಶ್ ಮುಂತಾದವರು ಉಪಸ್ಥಿತರಿದ್ದರು.